‘ಸಂಚಾರ ಸುಧಾರಣೆ’ಗೆ ಜನರಿಂದ ಸ್ಪಂದನೆ
ನಗರದಲ್ಲಿ ಸಂಚಾರ ದಟ್ಟಣೆಗೆ ಪೊಲೀಸರು ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಬೀದಿಬದಿ ವ್ಯಾಪಾರಿಗಳಲ್ಲಿ ಮಾತ್ರ ಆತಂಕ ಮನೆ ಮಾಡಿದೆ.
ಕಲಬುರ್ಗಿ: ನಗರದಲ್ಲಿ ಸಂಚಾರ ದಟ್ಟಣೆಗೆ ಪೊಲೀಸರು ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಬೀದಿಬದಿ ವ್ಯಾಪಾರಿಗಳಲ್ಲಿ ಮಾತ್ರ ಆತಂಕ ಮನೆ ಮಾಡಿದೆ.
ರಾಮಮಂದಿರದ ವೃತ್ತ ಮತ್ತು ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ರೈತರು, ವ್ಯಾಪಾರಿಗಳನ್ನು ಬೇರೆಡೆ ಸ್ಥಳಾಂತರಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಎರಡೂ ಸ್ಥಳಗಳಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಇನ್ನು ರಾಷ್ಟ್ರಪತಿ ವೃತ್ತ, ಸೂಪರ್ ಮಾರ್ಕೆಟ್ ರಸ್ತೆಯ ಎರಡೂ ಬದಿ, ಗಂಜ್ ಪ್ರದೇಶಗಳಲ್ಲಿ ರಸ್ತೆ ಬದಿ ತಳ್ಳು ಗಾಡಿಗಳ ವ್ಯಾಪಾರಿಗಳನ್ನು ಸರ್ಕಾರಿ ಐಟಿಐ, ಐವಾನ್–ಇ–ಶಾಹಿ ರಸ್ತೆ, ಸ್ಟೇಟ್ ಬ್ಯಾಂಕ್ ಹೈದರಾಬಾದ್ ಮತ್ತು ಕೆಎಂಎಫ್ ಮುಂಭಾಗಕ್ಕೆ ಸ್ಥಳಾಂತರಿಸುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ.
ಬೈಕ್, ಕಾರು ಸವಾರರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ನೌಕರರು, ಹಿರಿಯ ನಾಗರಿಕರು ಮತ್ತು ಸೂಪರ್ ಮಾರ್ಕೆಟ್*ನಲ್ಲಿನ ವ್ಯಾಪಾರಿಗಳು ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಸೂಪರ್ ಮಾರ್ಕೆಟ್*ನಲ್ಲಿ ಪೊಲೀಸರು ಸಾಕಷ್ಟು ಬದಲಾವಣೆ ತಂದಿದ್ದಾರೆ. ಆದರೆ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಕಬ್ಬಿಣದ ಸ್ಟ್ಯಾಂಡ್ ಅಳವಡಿಸಿದ್ದಾರೆ.
ಇದರಿಂದ ಬೈಕ್ ನಿಲುಗಡೆ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಅವುಗಳನ್ನು ತೆರವುಗೊಳಿಸಬೇಕು’ ಎಂದು ಬೈಕ್ ಸವಾರರು ಹೇಳುತ್ತಾರೆ.
‘ಸಮ–ಬೆಸ ನಿಯಮ ಜಾರಿಯಿಂದ ಸೂಪರ್ ಮಾರ್ಕೆಟ್*ನಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಗೆ ಬ್ರೇಕ್ ಬಿದ್ದಂತಾಗಿದೆ.
ಅಂಗಡಿಗಳ ಒಳಗೆ ಬರಲು ಗ್ರಾಹಕರು ಅನುಕೂಲವಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಸೂಪರ್ ಮಾರ್ಕೆಟ್*ನ ವ್ಯಾಪಾರಿಗಳು ಹೇಳುತ್ತಾರೆ.
* ಹೆಲ್ಮೆಟ್ ಕಡ್ಡಾಯ ಮಾಡಿದಂತೆ ಇದಾಗಬಾರದು. ಈಗ ಅನುಷ್ಠಾನಗೊಳಿಸಿರುವ ಎಲ್ಲ ನಿಯಮಗಳನ್ನು ಮುಂದುವರಿಸಿಸಬೇಕು. ಟ್ರಾಫಿಕ್ ಸಿಗ್ನಲ್*ಗಳನ್ನು ಬಳಕೆ ಮಾಡಬೇಕು.
- ವಿನುತಾ ಕುಲಕರ್ಣಿ , ವಿದ್ಯಾರ್ಥಿನಿ
ಯಾರು ಏನು ಹೇಳುತ್ತಾರೆ?
* ಪೊಲೀಸರು ಬಹಳ ದಿನಗಳ ನಂತರ ಒಳ್ಳೆಯ ಕೆಲಸ ಮಾಡಿದ್ದಾರೆ. ಇದನ್ನು ಹೀಗೆಯೇ ಮುಂದುವರಿಸಬೇಕು. ಸಮ–ಬೆಸ ನಿಯಮ ಪಾಲನೆ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಪೊಲೀಸರು ನಾಲ್ಕು ದಿನ ಮಾಡಿ ಬಿಡುತ್ತಾರೆ ಎಂಬ ಭಾವನೆ ಬಾರದಂತೆ ಅವರು ಕೆಲಸ ನಿರ್ವಹಿಸಬೇಕು.
-ಆನಂದಕುಮಾರ್ ನಾಖರೆ, ಸೂಪರ್ ಮಾರ್ಕೆಟ್ ನಿವಾಸಿ
* ಸಂಚಾರ ಸುಧಾರಣೆ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಹೊಸ ಅಧಿಕಾರಿಗಳು ಬಂದಿದ್ದರಿಂದ ಈ ಬದಲಾವಣೆ ಸಾಧ್ಯವಾಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದರಿಂದ ವಾಹನ ಸವಾರರಲ್ಲಿ ಶಿಸ್ತು ಬಂದಿದೆ. ಸಮಯವೂ ಉಳಿತಾಯವಾಗುತ್ತಿದೆ.
-ಅಭಿಷೇಕ ಸಂಗಮ, ಸ್ನಾತಕೋತ್ತರ ವಿದ್ಯಾರ್ಥಿ
* ಸೂಪರ್ ಮಾರ್ಕೆಟ್*ನಲ್ಲಿ ಒತ್ತುವರಿ ತೆರವುಗೊಳಿಸಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಆದಾಗ್ಯೂ ಇನ್ನಷ್ಟು ಸುಧಾರಣೆ ಮಾಡಬೇಕು. ಅಂಗವಿಕಲನಾಗಿರುವ ನನಗೆ ತ್ರಿಚಕ್ರ ವಾಹನ ಓಡಿಸುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಪೊಲೀಸರು ಹೆಚ್ಚು ಗಮನ ಹರಿಸಬೇಕು.
-ರಮೇಶ ಬಿರಾದಾರ, ಸುಲ್ತಾನಪುರ ನಿವಾಸಿ